ಡಾ. ಕಲವೀರ ಮನ್ವಾಚಾರ್
ನಿಗೂಢ ಪಂಥಗಳಾದ ಕಾಪಾಲಿಕ, ಕಾಳಮುಖ, ಶಾಕ್ತ ಪಂಥಗಳ ಅಧ್ಯಯನ ಕನ್ನಡದಲ್ಲಿ ಅತಿ ವಿರಳವೆಂದೇ ಹೇಳಬಹುದು. ಅದರಲ್ಲೂ ಶಕ್ತಿ ಆರಾಧನೆಯನ್ನು ಕುರಿತು ತಳಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ಬಂದಿಲ್ಲ. ಕನ್ನಡ ವಿದ್ವತ್ಲೋಕ ಈ ಕುರಿತಂತೆ ಒಂದು ರೀತಿಯ ನಿರ್ಲಕ್ಷ್ಯ ಧೋರಣೆಯನ್ನು ತಳೆದುದೇ ಆಗಿದೆ. ಆದರೆ ಅದಕ್ಕೆ ವಿರುದ್ಧವಾಗಿ ಜನಪದ ದೇವತೆಗಳನ್ನು ಕುರಿತು ತಕ್ಕಮಟ್ಟಿಗೆ ಅಧ್ಯಯನಗಳು ಆಗಿವೆ. ಇಂಗ್ಲಿಷ್ನಲ್ಲಿ ಶಕ್ತಿ ಆರಾಧನೆ ಅಥವಾ ಮಾತೃದೇವತೆ ಆರಾಧನೆಯನ್ನು ಕುರಿತು ಸಮೃದ್ಧವಾದ ಸಾಹಿತ್ಯ ಸೃಷ್ಟಿಯಾಗಿದೆ. ಕನ್ನಡದಲ್ಲಿ ಮಾತೃದೇವತೆಗಳ ಹುಟ್ಟು ಮತ್ತು ವಿಕಾಸವನ್ನು ಕುರಿತು ಪುಸ್ತಕಗಳು ಇಲ್ಲವೇ ಇಲ್ಲ. ಇದು ಕನ್ನಡದಲ್ಲಿ ಮೊದಲ ಪ್ರಯತ್ನವೆನ್ನಬಹುದು.